ಬಂದಾಬಹಾದೂರ್ -
ಹದಿನೆಂಟನೆಯ ಶತಮಾನದ ಪೂರ್ವಾರ್ಧದಲ್ಲಿ ಉತ್ತರ ಭಾರತದ ಅತ್ಯಂತ ಮಹತ್ತ್ವಪೂರ್ಣ ಘಟನಾವಳಿಗಳಿಗೆ ಕಾರಣನಾದ ವ್ಯಕ್ತಿ. ನಿಜನಾಮ ಲಕ್ಷ್ಮಣದಾಸ. 1670ರಲ್ಲಿ ಪೂಂಚ್ ಜಿಲ್ಲೆಯ ರಾಜೌರ್ ಎಂಬಲ್ಲಿ ಹುಟ್ಟಿದ ಈತ ರಜಪುತ್ರವಂಶಕ್ಕೆ ಸೇರಿದವ. ನಿವೃತ್ತಿ ಸ್ವಭಾವದಲ್ಲಿ ಸಾಧುಜೀವಿ. ರಾಜೌರಿನ ಮಾರ್ಗವಾಗಿ ಬದರೀ, ಕೇದಾರ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗುತ್ತಿದ್ದ ಸಾಧುಗಳ ಪ್ರಭಾವದಿಂದ ಈತ ತನ್ನ ಹೆಸರನ್ನು ಮಾಧವದಾಸನೆಂದು ಬದಲಾಯಿಸಿಕೊಂಡು, ಮಧ್ಯಭಾರತದ ಕಡೆ ಬಂದು, ಆಶ್ರಮಗಳಲ್ಲಿ ಕಾಲ ಕಳೆಯತೊಡಗಿದ. ಗೋದಾವರೀ ದಡದಲ್ಲಿರುವ ನಾಂದೇಡ್‍ನಲ್ಲಿ ತನ್ನದೇ ಒಂದು ಆಶ್ರಮ ಸ್ಥಾಪಿಸಿ ಸುಮಾರು ಹದಿನೈದು ವರ್ಷಗಳ ಕಾಲ ಧ್ಯಾನ, ಜಪ, ತಪ ಅನುಷ್ಠಾನಗಳಲ್ಲಿ ಕಳೆದ. 

	ಸಿಖ್ಖರ ಹತ್ತನೆಯ ಗುರು ಗೋವಿಂದಸಿಂಹ ಒಮ್ಮೆ ನಾಂದೇಡ್‍ಗೆ ಬಂದಿದ್ದಾಗ ಈತ ಮೊದಲ ನೋಟಕ್ಕೆ ಆತನ ವ್ಯಕ್ತಿತ್ವಕ್ಕೆ ಮಾರುಹೋಗಿ, ತನ್ನನ್ನು ಗೋವಿಂದಸಿಂಹನ ಬಂದಾ (ಸೇವಕ, ಶಿಷ್ಯ) ಎಂದು ಕರೆದುಕೊಂಡ. ಗುರುವಿಗಾಗಿ ಏನು ಮಾಡಲೂ ಸಿದ್ಧನಾದ. ಈ ಗುರು-ಶಿಷ್ಯ ಸಂದರ್ಶನದ ಬಗ್ಗೆ ಕೆಲವು ಐತಿಹ್ಯಗಳು ಪ್ರಚಾರದಲ್ಲಿವೆ. ಗುರು ತನ್ನ ಬಂದಾನಿಗೆ ವೀರಸಂದೇಶ ಕೊಟ್ಟು, ಮೊಗಲ್ ಮತಾಂಧರಿಂದ ತನ್ನ ತಂದೆ ತೇಗ್ ಬಹಾದೂರ್ ಶಿರಚ್ಛೇದನವಾದುದರ ಹಾಗೂ ತನ್ನ ಇಬ್ಬರು ಮಕ್ಕಳು ಹತರಾದುದರ ಸೇಡು ತೀರಿಸಿಕೊಳ್ಳುವಂತೆ ಕೇಳಿಕೊಂಡ. ವಿರಾಗಿಯಾಗಿದ್ದ ಗೋವಿಂದಸಿಂಹ ವೀರನಾದ. ಮೊಗಲರ ವಿರುದ್ಧ ಯುದ್ಧ ಘೋಷಿಸಿ ಎಲ್ಲ ವಿಧದ ಹೋರಾಟಕ್ಕೆ ಕರೆಕೊಟ್ಟ.

	ಬಂದಾ ಸೋನೇಪೇಟದಿಂದ ಹೊರಟು ಖೈತಾಳ ಮಾರ್ಗವಾಗಿ ಸಮನ ತಲುಪುವ ಮಾರ್ಗದಲ್ಲಿ ಹುಜೂರ್ ಖಜಾನೆಗಳನ್ನೂ ಶ್ರೀಮಂತರನ್ನೂ ಲೂಟಿಮಾಡಿ ಬಡವರಿಗೆ ಹಂಚಿದ. ಅಲ್ಲಿಂದ ಮಾಳವದ ಹೃದಯಭಾಗವನ್ನು ಸೇರಿ ಗುರಮ್ ಷಹಬಾದ್ ಮುಸ್ತಫಾಬಾದ್, ಕಪೂರಿ, ಸಧೌರಗಳನ್ನು ಕೊಳ್ಳೆಹೊಡೆದು ಸಿರ್‍ಹಿಂದ್‍ನ ಸುಭೇದಾರನಾದ ವಜೀರ್‍ಖಾನನನ್ನು ಯುದ್ಧದಲ್ಲಿ ಕೊಂದ. ಇದರಿಂದ ಗುರುವಿನ ಮಕ್ಕಳ ಮರಣಕ್ಕೆ ಕಾರಣನಾದ ಮತ್ತು ಗುರುವಿನ ಹತ್ಯೆಗೆ ಪ್ರಚೋದನೆ ಕೊಟ್ಟ ವ್ಯಕ್ತಿಯನ್ನು ಕೊಂದಂತೆ ಆಯಿತು. ಅಲ್ಲಿಗೆ ಜಮುನಾ-ಸಟ್ಲೆಜ್ ನಡುವಣ ಪ್ರದೇಶ ಬಂದಾನ ಕೈ ಸೇರಿತು. ಅನಂತರ ಈತ ಹಳೆಯ ಮುಖ್‍ಲಿಸ್‍ಗಢವನ್ನು ದುರಸ್ತಿಗೊಳಿಸಿ ಅಲ್ಲಿ ನೆಲಸಿ ಬಹದೂರ್ ಎಂಬ ಬಿರುದು ಧರಿಸಿದ. ಬಂದಾ ಬಾದಷಹ ಎಂದೂ ಕರೆದುಕೊಂಡು ಗುರುವಿನ ಹೆಸರಿನಲ್ಲಿ ನಾಣ್ಯ ಟಂಕಿಸಿದ. ಗುರು ಯುದ್ಧದ ಜವಾಬ್ದಾರಿ ಮಾತ್ರ ಹೊರಿಸಿದ್ದರೂ ಬಂದಾಬಹಾದೂರ ಧಾರ್ಮಿಕ ನೇತಾರನಂತೆ ನಡೆದುಕೊಂಡು ಉಪದೇಶ, ದೀಕ್ಷೆಗಳನ್ನೂ ಕೊಡಲು ಆರಂಭಿಸಿದ.

	1710ರಲ್ಲಿ ಸಹಾರನಪುರವನ್ನು ಗೆದ್ದು ಬೆಹತ, ಅಂಭೇತಗಳನ್ನು ಲೂಟಿಮಾಡಿ, ಜಮುನಾ-ಗಂಗಾ ದೋಅಬ್ ಪ್ರದೇಶದಲ್ಲಿ ಹಾಹಾಕಾರ ಹುಟ್ಟುವಂತೆ ಮಾಡಿದ. ಬಂದಾ ಮತ್ತೆ ಪಂಜಾಬಿನ ಕಡೆ ತಿರುಗಿ ಸಾಮಾಜಿಕ, ಆರ್ಥಿಕ ಸುಧಾರಣೆಗಳ ಕಡೆ ಗಮನಕೊಟ್ಟ. ಜಮೀನ್ದಾರಿ ವ್ಯವಸ್ಥೆಯನ್ನು ನಾಶಮಾಡಿ ಉಳುವವನಿಗೇ ಭೂಮಿ ಎಂದು ಘೋಷಿಸಿದ. ಬಹುಪಾಲು ಜಮೀನ್ದಾರರು ಮುಸ್ಲಿಮರೇ ಆಗಿದ್ದುದರಿಂದ ಬಂದಾ ಎರಡು ದಿಕ್ಕಿನಿಂದ ಶತ್ರುಗಳನ್ನು ಎದುರಿಸಬೇಕಾಯಿತು. ನವಾಬೀದೌಲತ್ತಿಗೆ ವಿದಾಯ ಹೇಳುವ, ಮೊಗಲಾಯೀ ಆಳ್ವಿಕೆಗೆ ವಿರಾಮ ಹಾಕುವ ಕಾರ್ಯ ಬಂದಾಗಿನಿಂದಲೇ ಆರಂಭವಾಯಿತು. ಪಂಜಾಬಿನಲ್ಲಿ ಜಾತ್ಯಾತೀತ ರೈತಶಕ್ತಿ ಹೊಮ್ಮಿದುದು ಬಂದಾ ಎಸಗಿದ ಪವಾಡ ಎನ್ನಬೇಕು. ಒಟ್ಟಾರೆ ಜಮುನಾದಿಂದ ರಾವಿವರೆಗೆ ಬಂದಾನ ಹೆಸರು ಪ್ರತಿಧ್ವನಿಸತೊಡಗಿತು. ಆಗ ದಕ್ಷಿಣಭಾರತದಲ್ಲಿದ್ದ ಚಕ್ರವರ್ತಿ ಬಹಾದುರ್‍ಷಹ ಕೂಡಲೇ ದೆಹಲಿಗೆ ಹಿಂದಿರುಗಿ ಸಕಲ ಸಿದ್ಧತೆಗಳೊಡನೆ, ದಂಡೆತ್ತಿಬಂದು ಜೇಹಾದ್ ಘೋಷಿಸಿದ. 1710ರಲ್ಲಿ ಪ್ರಾರಂಭವಾದ ಹೋರಾಟ 1711ರಲ್ಲಿ ಬಹಾದೂರ್ ಷಹ ನಿಧನನಾದಾಗ ಸ್ವಲ್ಪ ನಿಂತಿದ್ದು ಪುನಃ ಹೊಸ ಚಕ್ರವರ್ತಿ ಫರ್ರುಕ್ ಸಯ್ಯರ್ 1713ರಲ್ಲಿ ಅಧಿಕಾರ ಹಿಡಿದನಂತರ ಪ್ರಾರಂಭವಾಗಿ 1716ರ ತನಕವೂ ಮುಂದುವರಿಯಿತು. ಅದೊಂದು ರೋಮಾಂಚಕಾರೀ ಅಧ್ಯಾಯ, ಕಡೆಗೂ ಬಂದಾ ತನ್ನ ತಪ್ಪಿನಿಂದಲೇ ಸೆರೆಸಿಕ್ಕಬೇಕಾಯಿತು. ಆತನನ್ನು ಬಂಧಿಸಿ ಕಬ್ಬಿಣದ ಪಂಜರದಲ್ಲಿಟ್ಟು ಮೊದಲು ಲಾಹೋರಿಗೂ ಅನಂತರ ದೆಹಲಿಗೂ ತರಲಾಯಿತು. ಚಕ್ರವರ್ತಿಯ ಸೈನಿಕರು ದಾರಿಯುದ್ದಕ್ಕೂ ಬಂದಾನಿಗೆ ಚಿತ್ರ ವಿಚಿತ್ರ ಹಿಂಸೆ ನೀಡಿದರು. ಬಂದಾ ಮತ್ತು ಇತರ ಬಂಧಿಗಳೊಡನೆ ರಾಜಸೈನ್ಯ ದೆಹಲಿಯನ್ನು ತಲಪಿದ ಒಂದು ವಾರದ ಅನಂತರ 1716 ಜೂನ್ ತಿಂಗಳಲ್ಲಿ ಬಂದಾನ ಕಣ್ಣುಗಳನ್ನು ಕಿತ್ತು ಕೊಲ್ಲಲಾಯಿತು.
(ಎಂ.ಆರ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ